ತೇಲುಬುರುಡೆ -
ಬಂದರುಗಳಲ್ಲಿ ನಾಲೆಗಳನ್ನೂ ತೆಟ್ಟೆ ಜಾಗಗಳ ಅಂಚುಗಳನ್ನೂ ಅಪಾಯಕರ ಸ್ಥಳಗಳನ್ನೂ ಸೂಚಿಸಲು ಅಲ್ಲಲ್ಲಿ ಲಂಗರು ಹಾಕಿ ನಿಲ್ಲಿಸಿರುವ ಸಾಧನ (ಬ್ವಾಯ್). ತೇಲುಬುರುಡೆಗಳ ಸ್ಥಾನ ಮತ್ತು ವಿವರಣೆಗಳನ್ನು ನಕಾಸೆಗಳ ಮೇಲೆ ಗುರುತು ಮಾಡಿರುವುದರಿಂದ ನಾವಿಕ ತಾನು ಎಲ್ಲಿದ್ದೇನೆಂದು ತಿಳಿಯುವುದೂ ಸಾಧ್ಯವಾಗುತ್ತದೆ. ಒಂದು ತೇಲುಬುರುಡೆಯನ್ನು ಅದರ ಬಣ್ಣದಿದ ಸುಲಭವಾಗಿ ಗುರುತಿಸಬಹುದು. ಕೆಲವು ತೇಲು ಬುರುಡೆಗಳಲ್ಲಿ ದೀಪಗಳನ್ನು ಹೊತ್ತಿಸುತ್ತಾರೆ. ಆದರೆ ಹಡಗುಗಳಲ್ಲಿ ಕಾಣುವ ಸ್ಥಿರವಾದ ಬೆಳಕಿನಿಂದ ಪ್ರತ್ಯೇಕಿಸುವುದಕ್ಕಾಗಿ ಈ ದೀಪಗಳು ಹೊತ್ತಿ ನಂದುತ್ತಿರುತ್ತವೆ. ಕೆಲವು ಬುರುಡೆಗಳು ಗಂಟೆ, ಕೊಂಬು, ಸಿಳ್ಳೆ ಇವುಗಳಿಂದ ಎಚ್ಚರಿಕೆಗಾಗಿ ಶಬ್ಧಮಾಡುವುದೂ ಉಂಟು. ಈಚೆಗೆ ಸಮುದ್ರದ ರೇಡಾರ್ ಯಂತ್ರಗಳ ಜೊತೆಗೆ ಉಪಯೋಗಿಸುವ ಹಾಗೆ ತೇಲುಬುರುಡೆಗಳನ್ನು ಸಂವಿಧಾನ ಮಾಡಿದ್ದಾರೆ.

1922 ರಲ್ಲಿ ಬ್ರಿಟನ್ನಿನಲ್ಲಿ ನಿಘಂಟುಮಾಡಿದ ತೇಲುಬುರುಡೆಗಳ ಕ್ರಮ ಹೀಗಿದೆ. ನಾವಿಕ ಸಮುದ್ರದಿಂದ ಬಂದರಿನ ಕಡೆಗೆ ಬರುತ್ತಿರುವಾಗ ಅವನ ಬಲಭಾಗಕ್ಕೆ ಸ್ಟಾರ್ ಬೋರ್ಡ್ ಎಂದು ಎಡಬಾಗಕ್ಕೆ ಲಾರ್‍ಬೋರ್ಡ್ ಎಂದೂ ಹೆಸರು. 1 ನೀರಿನ ಮೇಲೆ ಚೂಪಾದ ಕೊನೆಯುಳ್ಳವು ಸ್ಟಾರ್‍ಬೋರ್ಡ್ ಬುರುಡೆಗಳು. ಇವಕ್ಕೆ ಸಾಮಾನ್ಯವಾಗಿ ಕೆಂಪು ಬಣ್ಣವನ್ನು ಬಳಿದಿರುತ್ತಾರೆ. ಚಪ್ಪಟೆಯಾದ ತಲೆಯುಳ್ಳವು ಲಾರ್‍ಬೋರ್ಡ್ ಬುರುಡೆಗಳು. ಇವಕ್ಕೆ ಕಪ್ಪು ಬಣ್ಣವನ್ನು ಬಳಿದಿರುತ್ತಾರೆ. 2 ಗೋಳಾಕಾರವಾದ ತಲೆಯುಳ್ಳವು ನಾಲೆಯ ಮಧ್ಯದಲ್ಲಿರುವ ಮರಳು ದಿಬ್ಬಗಳ ಕೊನೆಗಳನ್ನು ತೋರಿಸುತ್ತವೆ. ಇವುಗಳ ಮೇಲೆ ಮಟ್ಟವಾದ ಬಿಳಿಯ ರೇಖೆಗಳನ್ನು ಎಳೆದಿರುತ್ತಾರೆ. 3 ಎತ್ತರವಾಗಿ ಕಂಬದಂತಿರುವವು ದಡದ ಮೇಲೂ ಬಂದರುಗಳ ಪ್ರವೇಶ ಮಾರ್ಗಗಳಲ್ಲೂ ವಿಶೇಷ ಸ್ಥಾನಗಳನ್ನೂ ಸೂಚಿಸುತ್ತವೆ. 4 ನೀರಿನ ಮೇಲೆ ಕೂವೆ ಮರದಂತಿರುವ ಬುರುಡೆಗಳು ತೇಲುತ್ತಿರುವ ಮಂಜುಗಡ್ಡೆಗಳನ್ನೂ ವೇಗವಾದ ಪ್ರವಾಹಗಳನ್ನೂ ತೋರಿಸುತ್ತವೆ.

ನಾಲೆಯ ಅಥವಾ ಅಳಿವೆಯ ಒಂದೇ ಪಕ್ಕದಲ್ಲಿರುವ ತೇಲುಬುರುಡೆಗಳನ್ನು ಸಂಖ್ಯೆಗಳು ಅಕ್ಷರಗಳು ಮತ್ತು ಹೆಸರುಗಳಿಂದ ಗುರುತಿಸುತ್ತಾರೆ. ಹಡಗುಗಳನ್ನು ಕಟ್ಟಿಹಾಕುವ ಲಂಗರುಗಳನ್ನು ತೋರಿಸುವ ತೇಲುಬುರುಡೆಗಳು ಹಸಿರು ಬಣ್ಣವನ್ನು ಬಿಟ್ಟು ಉಳಿದ ಯಾವ ಬಣ್ಣದಲ್ಲಿ ಬೇಕಾದರೂ ಇರಬಹುದು. ಸಮುದ್ರದ ಕೆಳಗಿರುವ ಟೆಲಿಗ್ರಾಫ್ ತಂತಿಗಳನ್ನು ತೋರಿಸುವ ತೇಲುಬುರುಡೆಗಳಿಗೆ ಕಪ್ಪು ಬಣ್ಣವನ್ನು ಬಳಿದು ಬಿಳೀ ಅಕ್ಷರಗಳಲ್ಲಿ ಟೆಲಿಗ್ರಾಫ್ ಎಂದು ಬರೆದಿರುತ್ತಾರೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬಳಕೆಯಲ್ಲಿರುವ ಕ್ರಮ ಬೇರೆ ರೀತಿಯದು. ಸಮುದ್ರದಿಂದ ಬಂದರಿಗೆ ಬರುವ ನಾಲೆಯ ಎಡಗಡೆ ಇರುವವಕ್ಕೆ ಕಪ್ಪುಬಣ್ಣವನ್ನೂ ಬಲಗಡೆ ಇರುವವಕ್ಕೆ ಕೆಂಪು ಬಣ್ಣವನ್ನೂ ಬಳಿದು ಸಂಖ್ಯೆಗಳನ್ನು ಕೊಟ್ಟಿದ್ದಾರೆ. ಕೆಂಪು ಮತ್ತು ಕಪ್ಪು ಬಣ್ಣದ ಮಟ್ಟಗೆರೆಗಳುಳ್ಳ ತೇಲು ಬುರುಡೆಗಳು ಎದುರಿಗೆ ತಡೆಯಿದೆಯೆಂದೂ ಎಡಕ್ಕೊಂದು ಬಲಕ್ಕೊಂದು ನಾಲೆ ಇವೆ ಎಂದೂ ಸೂಚಿಸುತ್ತವೆ. ಕಪ್ಪು ಮತ್ತು ಬಿಳೀ ಮಟ್ಟ ರೇಖೆಗಳುಳ್ಳವು ನಾಲೆಯ ಮಧ್ಯಬಾಗವನ್ನು ತೋರಿಸುತ್ತವೆ. ಬಿಳಿಯ ತೇಲುಬುರುಡೆಗಳು ಲಂಗರುಗಳನ್ನೂ ಹಳದಿ ಬುರುಡೆಗಳು ಸಾಂಕ್ರಾಮಿಕ ರೋಗಗಳನ್ನು ಹರಡಬಹುದಾದ ರೋಗಿಗಳನ್ನು ಪ್ರತ್ಯೇಕಿಸುವ ಜಾಗಗಳನ್ನೂ  ತೋರಿಸುತ್ತವೆ. ತಳದಲ್ಲಿ ಬಿಳುಪು, ಮೇಲುಗಡೆ ಹಸಿರು ಬಳಿದಿರುವ ಬುರುಡೆಗಳು ನಾಲೆಗಳಲ್ಲಿ ಹೂಳನ್ನು ಎತ್ತುತ್ತಿರುವರೆಂದು ಸೂಚಿಸುತ್ತದೆ.

ತೇಲುಬುರುಡೆಗಳ ಮೇಲಿರುವ ಸಂಖ್ಯೆಗಳಿಂದ ನಾಲೆಯ ಯಾವ ದಡದ ಮೇಲೆ ಅವು ಇವೆಯೆಂದು ತಿಳಿದು ನಕ್ಷೆಗಳಲ್ಲಿ ಅವನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಅಪಾಯ ಸ್ಥಳಗಳನ್ನು ಗುರುತಿಸುವ ಮುಖ್ಯವಾದ ಬುರುಡೆಗಳಲ್ಲಿ ಸಂಖ್ಯೆಗಳ ಜೊತೆಗೆ ಅಕ್ಷರಗಳೂ ಇರುತ್ತವೆ. ಬೆಸ ಸಂಖ್ಯೆಗಳು ಸಮುದ್ರದ ಕಡೆಯಿಂದ ಎಡಭಾಗವನ್ನೂ ಸರಿ ಸಂಖ್ಯೆಗಳು ಬಲಭಾಗವನ್ನೂ ಸೂಚಿಸುತ್ತವೆ.

ಬ್ರಿಟಿಷ್ ಪದ್ಧತಿಯಲ್ಲಿರುವ ಹಾಗೆ ದೀಪಗಳಿರದೆ ಇದ್ದ ತೇಲುಬುರುಡೆಗಳಿಗೆ ಸಿಲಿಂಡರ್, ಶಂಕು ಮುಂತಾದ ನಿರ್ದಿಷ್ಟವಾದ ಆಕಾರಗಳಿರುತ್ತವೆ. ಅವಕ್ಕೆ ಬಣ್ಣವನ್ನು ಹಾಕಿರುತ್ತಾರೆ. ದೀಪಗಳಿರುವ ಬುರುಡೆಗಳಿಗೆ ಪ್ರತ್ಯೇಕವಾದ ಸಂಕೇತಗಳಿರುವುವು.
ರೇವುಪಟ್ಟಣವನ್ನು ಪ್ರವೇಶಿಸುವ ಹಡಗುಗಳು ನಿರ್ದಿಷ್ಟವಾದ ಜಾಗಗಳಲ್ಲಿ ಲಂಗರುಗಳನ್ನು ಬಿಡಲು ಅನುಕೂಲವಾಗುವ ಕಾಯಂ ಆದ ಲಂಗರುಗಳನ್ನು (ಮೂರಿಂಗಸ್) ಇಟ್ಟಿರುತ್ತಾರೆ. ಉಕ್ಕಿನಿಂದ ಮಾಡಿದ ಈ ಲಂಗರುಗಳು ಪಿಯರ್ ಹಣ್ಣಿನ ಆಕಾರವಾಗಿರುತ್ತವೆ.
ಪರೀಕ್ಷೆಮಾಡಿದ ತಂತಿಯ ಹೊರಜಿಗಳಿಂದ ತೇಲುಬುರುಡೆಯನ್ನು ಕಾಂಕ್ರೀಟ್ ಬೀಡು ಕಬ್ಬಿಣದ ದಿಮ್ಮಿಗಳಿಗೆ ತಗಲಿಸಿರುತ್ತಾರೆ. ಇವುಗಳಿಗೆ ಸ್ವತಶ್ಚಲಿಯಾದ ಸೀಟಿಗಳನ್ನು ಜೋಡಿಸಿ ಶಬ್ಧದಿಂದಲೂ ಎಚ್ಚರಿಕೆಯನ್ನು ಕೊಡುತ್ತಾರೆ. ಪ್ರಬಲವಾದ ಪ್ರವಾಹಗಳಿರುವ ಕಡೆ ಬೆಳಕಿರುವ ದೋಣಿಯ ಆಕಾರದ ತೇಲುಬುರುಡೆಗಳನ್ನೂ ಇಟ್ಟಿರುತ್ತಾರೆ.				(ಎಚ್.ಸಿ.ಕೆ.)

ತೇಲು ಹಕ್ಕಿ: ಕಾರಡ್ರೈಯಿಫಾರ್ಮಿಸ್ ಗಣದ ರಿಂಕಾಪಿಡಿ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಹಕ್ಕಿಗಳ ಸಾಮಾನ್ಯ ಹೆಸರು (ಸ್ಕಿಮರ್). ಸಮಶೀತೋಷ್ಣ ಮತ್ತು ಉಷ್ಣವಲಯಗಳಲ್ಲಿ ಕಾಣಬರುವುವು. ಈ ಹಕ್ಕಿಗಳ ವೈe್ಞÁನಿಕ ಹೆಸರು ರಿಂಕಾಪ್ಸ್. ಟರ್ನ್ ಹಕ್ಕಿಗಳನ್ನು ಹೋಲುವ ಇವು ಅತಿ ಉದ್ದವಾದ ರೆಕ್ಕೆ ವಿಶಿಷ್ಟವಾದ ಚಾಕುವಿನಂಥ ಕೊಕ್ಕು, ಉದ್ದಸೀಳು, ಪಡೆದಿರುವ ಕಣ್ಣಿನ ಪಾಪೆ (ಪ್ಯೂಪಿಲ್) ಮೊದಲಾದ ಲಕ್ಷಣಗಳಿಂದ ಕೂಡಿದ್ದು ಟರ್ನ್ ಹಕ್ಕಿಗಳಿಗಿಂತ ಭಿನ್ನವಾಗಿದೆ. ಉದ್ದಸೀಳಿನ ಕಣ್ಣಿನಪಾಪೆ ಈ ಹಕ್ಕಿಗಳ ವಿಶೇಷ ಲಕ್ಷಣ. ತೀಕ್ಷ್ಣವಾದ ಸೂರ್ಯನ ಪ್ರಭೆಯಿಂದ ಕಣ್ಣುಗಳನ್ನು ಇಂಥ ಪಾಪೆ ರಕ್ಷಿಸುತ್ತದೆ. ಈ ಹಕ್ಕಿಗಳಿಗೆ ಮೊನಚಾದ ರೆಕ್ಕೆಗಳು, ಮಿತವಾಗಿ ಕವಲೊಡೆದಿರುವ ಬಾಲ, ಗಿಡ್ಡ ಕಾಲುಗಳು ಮತ್ತು ಒಳನಿಟ್ಟಿನಿಂದಲೇ ರೂಪುಗೊಂಡ ಜಾಲಪಾದ ಉಂಟು. ತೇಲು ಹಕ್ಕಿಗಳಲ್ಲಿ ಮೂರು ಪ್ರಭೀದಗಳಿವೆ. ಇವುಗಳ ಗರಿಗಳ ಬಣ್ಣದಲ್ಲಿ ಅಲ್ಪ ವ್ಯತ್ಯಾಸವನ್ನು ಕಾಣಬಹುದು. ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ. 1 ಭಾರತದ ತೇಲುಹಕ್ಕಿ : ಭಾರತದ ದೊಡ್ಡನದಿಗಳು ಮತ್ತು ಸರೋವರಗಳಲ್ಲಿ ವಾಸಿಸುವ ಏಷ್ಯಖಂಡದ ಏಕಮಾತ್ರ ತೇಲುಹಕ್ಕಿ. ಇದರ ಕತ್ತು ಬಿಳಿಬಣ್ಣದ್ದು, ಕೊಕ್ಕಿನ ಬಣ್ಣ ಹಳದಿ 2 ಅಮೆರಿಕದ ಕಪ್ಪು ತೇಲುಹಕ್ಕಿ : ಇವುಗಳ ಕೊಕ್ಕು ಕಿತ್ತಳೆಬಣ್ಣದ್ದು. ಕೊಕ್ಕಿನ ತುದಿ ಮಾತ್ರ ಕಪ್ಪು. 3 ಆಫ್ರಿಕದ ತೇಲುಹಕ್ಕಿ: ಮಿಂಚುವ ಹಳದಿ ತುದಿಯ ಕಿತ್ತಲೆ ಬಣ್ಣದ ಕೊಕ್ಕನ್ನು ಹೊಂದಿರುವ ಚಿಕ್ಕಗಾತ್ರದ ತೇಲುಹಕ್ಕಿ ಆಫ್ರಿಕ ಖಂಡದ ಕರಾವಳಿ, ಸರೋವರ, ನದೀತೀರಗಳಲ್ಲಿ ವಾಸಮಾಡುತ್ತದೆ.

ಅಮೆರಿಕದ ಕಪ್ಪು ತೇಲು ಹಕ್ಕಿ ತೇಲುಹಕ್ಕಿಗಳಲ್ಲೆಲ್ಲ ದೊಡ್ಡದು. ಭಾರತದ ಮತ್ತು ಆಫ್ರಿಕ ಖಂಡದ ತೇಲುಹಕ್ಕಿಗಳು ಚಿಕ್ಕಗಾತ್ರದವು. ಇವುಗಳ ಬೆನ್ನಭಾಗ ಕಪ್ಪು ಮಿಶ್ರಿತ ಕಂದು ಬಣ್ಣದ್ದು. ತೇಲುಹಕ್ಕಿಗಳ ಕೊಕ್ಕು ವಿಶಿಷ್ಟ ಬಗೆಯದು. ದವಡೆಗಳ ಅಂಚು ರೇಜರಿನ ಅಂಚಿನಂತೆ ತೆಳುವಾಗಿದೆ. ಕೆಳದವಡೆ ಮೇಲುದವಡೆಗಿಂತ ಮುಂದಕ್ಕೆ ಚಾಚಿದೆ.  ಕೆಳದವಡೆಯ ಪಾಶ್ರ್ವಗಳ ಅಂಚು ಚಪ್ಪಟೆಯಾಗಿದ್ದು ಚಾಕುವಿನಷ್ಟು ಹರಿತವಾಗಿದೆ. ಮೇಲುದವಡೆಯಲ್ಲಿ ಸಂದುಗೆರೆಯುಂಟು. ಬಾಯಿ ಮುಚ್ಚಿಕೊಳ್ಳುವಾಗ ಕೆಳದವಡೆಗೆ ಹೊಂದಿಕೊಳ್ಳಲು ಇದು ಸಹಾಯಕವಾಗಿದೆ.

ತೇಲುಹಕ್ಕಿಗಳು ತೆಟ್ಟೆ ನೀರಿನಲ್ಲಿ ವಾಸಿಸುವ ಮೀನು ಮತ್ತು ಸೀಗಡಿ ಮೀನುಗಳನ್ನು ವಿಚಿತ್ರ ರೀತಿಯಲ್ಲಿ ಹಿಡಿದು ತಿನ್ನುತ್ತವೆ. ನದಿಗಳ ಅಂಚಿನಲ್ಲೂ ಕೊಳ ಮತ್ತು ಸರೋವರಗಳಲ್ಲೂ ಸಮುದ್ರದ ದಂಡೆಯಲ್ಲೂ ಇವು ಅಹಾರವನ್ನು ಬೇಟೆಯಾಡುತ್ತವೆ. ಉಬ್ಬರವಿಳಿತದ ಕಾಲದಲ್ಲಿ ನಸುಕಿನಲ್ಲಿ ಮತ್ತು ಸಂಜೆಯಲ್ಲಿ ಬಹಳ ಚುರುಕಾಗಿ ಮೀನುಗಳನ್ನು ಹಿಡಿದು ತಿನ್ನುತ್ತವೆ. ಉಬ್ಬರ ಹೆಚ್ಚಾಗಿರುವ ಕಾಲದಲ್ಲಿ ಸಮುದ್ರದಂಡೆಯ ಮರಳಿನ ಮೇಲೆ ಸುಮ್ಮನೆ ಕುಳಿತಿರುವುವು. ಬೇಟೆಯಾಡುವಾಗ ಬಾಯಿಯನ್ನು ತೆರೆದು ನೀರಿಗೆ ಹತ್ತಿರವಾಗಿ ಹಾರಾಡುತ್ತ ಕೊಕ್ಕಿಗೆ ತಾಕಿದ ಮೀನುಗಳನ್ನು ಸೆರೆಹಿಡಿಯುತ್ತವೆ. ಮೀನು ಹಿಡಿಯುವ ಕಾಲದಲ್ಲಿ ಮೇಲುದವಡೆ ನೀರಿನ ಮೇಲ್ಭಾಗದಲ್ಲೂ ಕೆಳದವಡೆ ನೀರಿನ ಒಳಗೂ ಇರುತ್ತದೆ. ನೀರಿನ ಹತ್ತಿರದಲ್ಲೇ ಹಾರುತ್ತ ಕೆಳದವಡೆಯಿಂದ ನೀರನ್ನು ಉಳುವ ರೀತಿಯಲ್ಲಿ ಛೇದಿಸಿಕೊಂಡು, ಬಾಯನ್ನು ಅಗಲವಾಗಿ ತೆರೆದು, ಕೆಳದವಡೆಗೆ ಸೋಕಿದ ಮೀನನ್ನು ಮೇಲುದವಡೆಯ ಸಹಾಯದಿಂದ ನುಂಗುತ್ತವೆ. ಇವುಗಳ ಈ ವಿಲಕ್ಷಣ ಆಹಾರ ಸೇವನೆಯ ರೀತಿಯಿಂದ ರಿಂಕಾಪ್ಸ್ ವರ್ಗದ ಹಕ್ಕಿಗಳನ್ನು ಜಲಸೀಳಿಕೆಗಳು, ಕತ್ತರಿ ಕೊಕ್ಕಿನ ಹಕ್ಕಿಗಳು ಎಂದು ಕರೆಯುವುದೂ ಉಂಟು.

ತೇಲು ಹಕ್ಕಿಗಳ ಗುಂಪು ಸಮುದ್ರ ತೀರದ ಮರಳಿನಲ್ಲಿ ಅಥವಾ ನದಿಯ ಇಕ್ಕೆಲಗಳಲ್ಲಿ ಸಣ್ಣ ಗೂಡನ್ನು ರಚಿಸುವುದು. ಪ್ರಣಯಾಚರಣೆಯ ಕಾಲದಲ್ಲಿ ಗಂಡು ಹಕ್ಕಿ ಕೊಕ್ಕಿನಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಸಣ್ಣ ಕಡ್ಡಿಯನ್ನು ಹೆಣ್ಣುಹಕ್ಕಿಗೆ ಅರ್ಪಿಸುವುದುಂಟು. ಒಂದು ಸಲಕ್ಕೆ ಮೂರು ಅಥವಾ ನಾಲ್ಕು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳ ಮೇಲೆ ಮಚ್ಚೆಗಳುಂಟು. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಕಾವು ಕೊಡುವ ಕೆಲಸವನ್ನು ಹಂಚಿಕೊಳ್ಳತ್ತವೆ. ಮರಿಹಕ್ಕಿಗಳು ಬೂದು ಬಣ್ಣಕ್ಕಿವೆ. ಇವು ನೆಲದ ಮೇಲೆ ಚಪ್ಪಟೆಯಾಗಿ ಮುದುರಿಕೊಳ್ಳುವುದರಿಂದ ಇವನ್ನು ಪತ್ತೆಹಚ್ಚುವುದು ಕಷ್ಟ. ಮರಿಹಕ್ಕಿಗಳ ಮೇಲು ಮತ್ತು ಕೆಳದವಡೆಗಳೆರಡೂ ಸಮಾನ ಉದ್ದನಾಗಿರುತ್ತವೆ. ಇದರಿಂದಾಗಿ ನೆಲದ ಮೇಲೆ ಬಿದ್ದ ಮೀನನ್ನು ಕೊಕ್ಕಿನ ಸಹಾಯದಿಂದ ಇವು ಎತ್ತಿಕೊಳ್ಳಬಲ್ಲವು.
(ಎ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ